ಹಿಮಾಲಯ ಪರ್ವತಗಳು
	ಭಾರತ, ಚೀನ, ನೇಪಾಲ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಸರಹದ್ದುಗಳನ್ನು ದಕ್ಷಿಣ ಏಷ್ಯದ ಉತ್ತರ ಭಾಗದಲ್ಲಿ ವ್ಯಾಪಿಸಿರುವ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ. ಇದು ಮಡಿಕೆ ಪರ್ವತಗಳಿಂದ ಕೂಡಿದ್ದು ಸದಾ ಹಿಮದಿಂದಾವೃತವಾಗಿರುತ್ತದೆ. ಆದ್ದರಿಂದ ಇದನ್ನು ಹಿಮಾಲಯ ಎಂದು ಕರೆಯಲಾಗಿದೆ. ಅಲ್ಲದೆ ಇವುಗಳನ್ನು ಹಿಮಾವನ್, ಹಿಮಾದ್ರಿ ಅಥವಾ ಹಿಮಾಚಲ್ ಎಂದು ಸಹ ಕರೆಯುವರು. ಈ ಶ್ರೇಣಿ ವಿವಿಧ ಪರ್ವತ ಸಾಲುಗಳನ್ನು ಒಳಗೊಂಡಿದೆ. ಭಾರತದ ಉತ್ತರದ ಗಡಿಯಲ್ಲಿ ಅದ್ಭುತವಾದ ಗೋಡೆಯುತಿದ್ದು, ಅವು ಪಶ್ಚಿಮ-ಪೂರ್ವಾಭಿಮುಖವಾಗಿ ಸಿಂಧೂ ನದಿ ಕಣಿವೆಯಿಂದ ಬ್ರಹ್ಮಪುತ್ರ ನದಿ ಕಣಿವೆಯವರೆಗೆ ಸು. 2400 ಕಿಮೀ ಉದ್ದವಾಗಿ ಅವಿಚ್ಛಿನ್ನವಾಗಿ ಹಬ್ಬಿವೆ. ದಕ್ಷಿಣ-ಉತ್ತರವಾಗಿ ಸು. 200 ರಿಂದ 500 ಕಿಮೀಗಳು ಅಗಲವಾಗಿವೆ. ಈ ಪರ್ವತಗಳು ಸು. 5 ಲಕ್ಷ ಚ.ಕಿಮೀ ವಿಸ್ತೀರ್ಣವುಳ್ಳ ಪ್ರದೇಶವನ್ನು ಆವರಿಸಿವೆ. ಮಧ್ಯ ಏಷ್ಯದ ಪಾಮಿರ್ ಗ್ರಂಥಿಯಿಂದ ಅನೇಕ ಪರ್ವತ ಸರಣಿಗಳು ಪ್ರಾರಂಭಗೊಂಡು ವಿವಿಧ ದಿಕ್ಕುಗಳಿಗೆ ಹರಡಿವೆ. ಹಿಮಾಲಯದ ಈ ಪರ್ವತಗಳು ಪಾಮಿರ್ ಗ್ರಂಥಿಯಿಂದ ಪೂರ್ವಾಭಿಮುಖವಾಗಿ ವಕ್ರ ರೇಖೆಯಲ್ಲಿ ಹಬ್ಬಿವೆ. ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗಗಳಲ್ಲಿ ಅಗಲವಾಗಿದ್ದು ಪೂರ್ವಕ್ಕೆ ಹೋದಂತೆ ಕಿರಿದಾಗುತ್ತವೆ. ಈ ಪರ್ವತಗಳು ನೇಪಾಲ ವಲಯದಲ್ಲಿ ಅತ್ಯಂತ ಎತ್ತರವಾಗಿವೆ. ಭಾರತದ ಕಡೆಗೆ ಕಡಿದಾದ ಮತ್ತು ಟಿಬೆಟ್ ಕಡೆಗೆ ಬಳಿದಾದ ಇಳಿಜಾರಿನಿಂದ ಕೂಡಿವೆ.

	ಹಿಮಾಲಯ ಪರ್ವತ ಸಮುಚ್ಛಯವು, ಕಡಿದಾದ ಇಳಿಜಾರು, ಸದಾಹಿಮದಿಂದ ಆವೃತವಾದ ಭಾಗಗಳು, ಆಳವಾದ ಕಣಿವೆಗಳು, ಯೌವನಾವಸ್ಥೆಯ ನದಿಗಳು, ಸಂಕೀರ್ಣವಾದ ಭೂಗರ್ಭದ ರಚನೆ ಮತ್ತು ಉತ್ತಮವಾದ ಸಮಶೀತೋಷ್ಣ ವಲಯದ ಸಸ್ಯವರ್ಗ ಮುಂತಾದವುಗಳನ್ನು ಉಷ್ಣವಲಯದಲ್ಲಿ ಹೊಂದಿದೆ. 

	ಹಿಮಾಲಯ ಸರಣಿಯ ಪರ್ವತಗಳು ಒಂದಕ್ಕೊಂದು ಸರಪಳಿಯಂತೆ ಬೆಸೆದು ಎತ್ತರವಾಗಿವೆ. ಸು. 14 ಪರ್ವತಗಳು ಸರಾಸರಿ ಸಮುದ್ರಮಟ್ಟದಿಂದ 8000 ಮೀಟರ್‍ಗಳಿಗಿಂತ ಎತ್ತರವಾಗಿಯೂ ಸು. 20 ಪರ್ವತಗಳು 7500 ಮೀಗಿಂತ ಎತ್ತವಾಗಿಯೂ ಸುಮಾರು 94 ಪರ್ವತಗಳು 7300 ಮೀ ಗಿಂತಲೂ ಎತ್ತರವಾಗಿ ಇವೆ. ಇವುಗಳಲ್ಲಿ ಹಿಮಾಲಯ ಮತ್ತು ಕಾರಕೋರಮ್ ಶ್ರೇಣಿಯು ಪ್ರಮುಖವಾದದು. 

	ಹಿಮಾಲಯ ಪರ್ವತದ ಉಗಮ: ಹಿಮಾಲಯ ಪರ್ವತದ ಉಗಮದ ಬಗ್ಗೆ ಹಲವಾರು ಸಂಶೋಧಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅವರಲ್ಲಿ ಸ್ಪೇಟ್, ಡಿ.ಎನ್. ವಾಡಿಗರ್, ಎಂ.ಎಸ್. ಕೃಷ್ಣನ್ ಮತ್ತು ವ್ಯಾಗರ್ ಮೊದಲಾದವರು ಸೇರಿದ್ದಾರೆ. ಹಿಮಾಲಯ ಪ್ರದೇಶವು ಸು. 120 ಮಿಲಿಯನ್ ವರ್ಷಗಳ ಹಿಂದೆ ಟಿಥಿಸ್ ಎಂಬ ವಿಶಾಲವಾದ ಸಾಗರ ಒಂದರ ಭಾಗವಾಗಿದ್ದಿತು. ಮಯೋಸೆನ್ ಭೂ ಯುಗದಲ್ಲಿ ಟಿಥಿಸ್ ಸಾಗರದ ಉತ್ತರದಲ್ಲಿದ್ದ ಅಂಗಾರ ಮತ್ತು ದಕ್ಷಿಣದಲ್ಲಿದ್ದ ಗೊಂಡ್ವಾನ ಭೂ ಭಾಗಗಳ ಒತ್ತಡದಿಂದಾಗಿ ಸಾಗರ ತಳದ ಶಿಲಾಸ್ತರಗಳು ಮೇಲಕ್ಕೆ ಮಡಿಕೆಗೊಳ್ಳುವ ಮೂಲಕ ಹಿಮಾಲಯ ಪರ್ವತಗಳು ನಿರ್ಮಾಣಗೊಂಡಿತೆಂದು ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ. ಇದು ಭೂಮಂಡಲದಲ್ಲಿಯೇ ಅತ್ಯಂತ ಇತ್ತೀಚಿನ ಮಡಿಕೆ ಪರ್ವತವೆಂದು ಕರೆಯಲಾಗಿದೆ. ಇದರ ಗರಿಷ್ಠ ಎತ್ತರವು ಉತ್ತರದ ಕಡೆಗೆ ಹೆಚ್ಚು ಇದೆ. ಪಶ್ಚಿಮದಲ್ಲಿ ಅರಾವಳಿ ಪರ್ವತಗಳಿಂದ. ಪೂರ್ವದಲ್ಲಿ ಅಸ್ಸಾಂ ಶಿಖರಗಳವರೆಗೆ ಹಬ್ಬಿದ್ದು ಮಧ್ಯಭಾಗ ಗಟ್ಟಿಶಿಲೆಯಿಂದ ಕೂಡಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ಉತ್ತರದ ಕಡೆಗೆ ವರ್ಷಕ್ಕೆ 5 ಸೆಂ.ಮೀ ನಷ್ಟು ಚಲಿಸುತ್ತಿದೆ ಎಂದು ಭೂವಿಜ್ಞಾನಿಗಳ ಅಭಿಪ್ರಾಯ. ಈ ರೀತಿಯ ಹಿಮಾಲಯದ ಪರ್ವತ ಉತ್ತರದ ಅಂಗಾರ ಮತ್ತು ದಕ್ಷಿಣದ ಗೊಂಡ್ವಾನ ಪ್ರದೇಶಗಳ ಮಧ್ಯಭಾಗದಲ್ಲಿ ನೆಲೆಸಿದೆ.

	ಡಯೊಸ್ಟ್ರೊಫಿಕ್ ಚಲನೆಯಿಂದ ಹಿಮಾಲಯ ಪರ್ವತವು ಬೆಳೆಯಲು ಪೂರಕವಾಗಿದೆ. ಕೆಲವು ಸಾಕ್ಷ್ಯಳ ಆಧಾರದ ಮೇಲೆ ಅಧ್ಯಯನ ಮಾಡುವುದಾದರೆ ಇದರ ಬೆಳೆವಣಿಗೆಯ ಇನ್ನೂ ನಿಂತಿಲ್ಲ. ಬೇರೆ ಬೇರೆ ಎತ್ತರವಾದ ಪ್ರದೇಶಗಳನ್ನು ತಾಂತ್ರಿಕ ವಿಧಾನದಿಂದ ಅಳತೆ ಮಾಡಬಹುದು. ಪ್ರತಿ ವರ್ಷ ಹಿಮಾಲಯ ಪರ್ವತ ಸು. 5 ರಿಂದ 10 ಸೆಂಮೀ. ನಷ್ಟು ಮೇಲಕ್ಕೆ ಏರುತ್ತಿದೆ.

	ವಿಭಾಗಗಳು: ಭೂಗೋಳಶಾಸ್ತ್ರಜ್ಞರು ಹಿಮಾಲಯವನ್ನು ಸಾಮಾನ್ಯವಾಗಿ ಭೌಗೋಳಿಕ, ಪ್ರಾದೇಶಿಕ ಹಾಗೂ ಭೂಗರ್ಭದ ಆಧಾರದ ಮೇಲೆ ವಿಂಗಡಿಸಿದ್ದಾರೆ. ಭೌಗೋಳಿಕವಾಗಿ ಹಿಮಾಲಯವನ್ನು ಮುಖ್ಯವಾಗಿ ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ: 1. ಹಿಮಾಲಯ ಸರಣಿ, 2. ಹಿಮಾಲಯ ಸರಣಿಯಾಚೆಯ ಪರ್ವತಗಳು 3. ಪೂರ್ವದ ಬೆಟ್ಟಗಳು.

	1. ಹಿಮಾಲಯ ಸರಣಿ: ಹಿಮಾಲಯ ಪರ್ವತಗಳು ಒಂದೇ ರೀತಿಯಾಗಿಲ್ಲ. ಇವು ಒಂದು ಕೊಂಡಿಯಿಂದ ಉಂಟಾದವಲ್ಲ. ಇಲ್ಲಿ ಅನೇಕ ಪರ್ವತ ಸರಣಿಗಳು ಸಮನಾಂತರವಾಗಿ ಹಬ್ಬಿವೆ. ಈ ಪರ್ವತಸರಣಿಗಳನ್ನು ಆಳವಾದ ಕಣಿವೆಗಳು ಬೇರ್ಪಡಿಸಿವೆ. ಇಲ್ಲಿನ ಭೂಮೇಲ್ಮೈಯು ಗುಡ್ಡಗಳಿಂದ, ಆಳವಾದ ಕಣಿವೆಗಳಿಂದ  ಕೂಡಿದೆ. ಕಾಶ್ಮೀರದ ವೆಲಿ ಕಣಿವೆ ಮತ್ತು ಕಾರೇವಸ್, ಕಾಗಾರ ಮತ್ತು ಕುಲು ಕಣಿವೆ ಹಿಮಾಚಲ ಪ್ರದೇಶದಲ್ಲಿ; ಧುನ್ ಮತ್ತು ಭಾಗೀರಥಿ ಕಣಿವೆಗಳು ಗಂಗೋತ್ರಿಯ ಹತ್ತಿರ, ಮಂದಾಕಿನಿ ಕಣಿವೆಯು ಉತ್ತರ ಪ್ರದೇಶದಲ್ಲಿ ಹಾಗೂ ಕಠ್ಮಂಡು ಕಣಿವೆ ನೇಪಾಲದಲ್ಲಿ ನೆಲೆಸಿವೆ. ಇಲ್ಲಿಯ ಪರ್ವತಗಳು ದಕ್ಷಿಣದ ಕಡೆಗೆ ಕಡಿದಾಗಿಯೂ ಉತ್ತರದ ಕಡೆಗೆ ಬಳಿದಾಗಿಯೂ ಇರುತ್ತವೆ. ಬಂಗಾಲ ಮತ್ತು ಉತ್ತರಾಂಚಲ ರಾಜ್ಯಗಳಲ್ಲಿ ತಗ್ಗಾಗಿದ್ದ ಬೆಟ್ಟಗಳು ಒಮ್ಮೆಗೆ ಏರುಮೈ ಪಡೆಯುತ್ತವೆ. ಪಶ್ಚಿಮವಲಯದ ಹಿಮಾಲಯ ಎತ್ತರದಲ್ಲಿ ಕಡಿಮೆಯಾಗಿದೆ. ಈ ಭಾಗದಲ್ಲಿ ಮುಖ್ಯವಾಗಿ ಸಮನಾಂತರವಾಗಿ ಮೂರು ಪರ್ವತ ಸರಣಿಗಳು ಸಿಂಧೂ ಕಣಿವೆ ಮೈದಾನದಿಂದ ಟೆಬೆಟ್ ಪ್ರಸ್ಥಭೂಮಿಯವರೆಗೆ ಹಬ್ಬಿವೆ.

	ಶಿವಾಲಿಕ್ ಬೆಟ್ಟಗಳು: ಹಿಮಾಲಯ ಪರ್ವತಗಳ ದಕ್ಷಿಣದ ಪಾದದ ಬೆಟ್ಟಗಳೇ ಶಿವಾಲಿಕ್ ಶ್ರೇಣಿ, ಇದು ಪರ್ವತಗಳು ಸಮಾನಾಂತರವಾಗಿ ಸು. 2400 ಕಿಮೀ ವರೆಗೆ ಹಬ್ಬಿವೆ. ಇವು ಪೋಟ್ವಾರ್ ಪ್ರಸ್ಥಭೂಮಿಯಿಂದ ಬ್ರಹ್ಮಪುತ್ರ ಕಣಿವೆಯವರೆಗೆ ಕಂಡುಬರುತ್ತವೆ. ಶಿವಾಲಿಕ್ ಬೆಟ್ಟಗಳು ಹಿಮಾಚಲ ಪ್ರದೇಶದಲ್ಲಿ 50 ಕಿಮೀ. ಅಗಲವಾಗಿದ್ದು, ಪೂರ್ವದ ಅರುಣಾಚಲಪ್ರದೇಶದಲ್ಲಿ 15 ಕಿಮೀ. ಅಗಲ ಹೊಂದಿವೆ. 80 ರಿಂದ 90 ಕಿಮೀ. ದೂರದವರೆಗೆ ಒಂದೇ ಸರಣಿ ಕಂಡುಬರುತ್ತದೆ. ಇಲ್ಲಿ ಟಿಸ್ತಾನದಿ ಕಣಿವೆಯು ಆಕ್ರಮಿಸಿಕೊಂಡಿದೆ. ಇಲ್ಲಿ ಪರ್ವತಗಳ ಎತ್ತರ ಸು. 600 ರಿಂದ 1500 ಮೀ. ಶಿವಾಲಿಕ್ ಬೆಟ್ಟಗಳು ಮಹಾ ಹಿಮಾಲಯ ಭಾಗದಿಂದ ಹರಿದು ಬರುವ ನದಿಗಳು ಹೊತ್ತು ತಂದ ವಸ್ತುಗಳ ಸಂಚಯನದಿಂದ ನಿರ್ಮಾಣವಾಗಿವೆಯಂತಲೂ ಇವು ಮಯೋಸೀನ್ ಯುಗದಿಂದ ಪ್ಲಿಯೋಸೀನ್ ಯುಗದವರೆಗೆ ನಿರ್ಮಾಣವಾಗಿರಬಹುದೆಂದು ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ. ಈ ಶಿವಾಲಿಕ್ ಬೆಟ್ಟಗಳನ್ನು ಸ್ಥಳೀಯವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

	ಹಿಮಾಲಯ ಪರ್ವತಗಳ ಉಗಮದ ಅನಂತರ ಶಿವಾಲಿಕ್ ಬೆಟ್ಟಗಳು ಉದ್ಭವವಾಗಿವೆ. ಹಿಮಾಲಯದ ಎತ್ತರ ಪರ್ವತಗಳಿಂದ ತಂದ ನೀರಿನಿಂದ ಇಲ್ಲಿ ಕೆಲವು ಸರೋವರಗಳು ತಾತ್ಕಾಲಿಕವಾಗಿ ನಿರ್ಮಾಣವಾಗಿವೆ. ಈ ಶಿವಾಲಿಕ್ ಪರ್ವತಗಳನ್ನು ನದಿಗಳು ಕೊರೆಯುವುದರಿಂದ ಕೆಲವು ಮರಳು ಮಣ್ಣಿನಿಂದ ಗೋಪುರಾಕೃತಿಯಲ್ಲಿ ರಚನೆಯಾಗಿವೆ. ಉದಾ: ಡೆಹರಾಡೂನ್ ಬೆಟ್ಟಸಾಲು 75 ಕಿಮೀ ಉದ್ದವಾಗಿದ್ದು ಸುಮಾರು 15-20 ಕಿಮೀ ಅಗಲವಾಗಿದೆ. ಕೋಟಾ, ಪಾಟಿಲ ಮತ್ತು ಚಾಕಾಂಬ ಮುಂತಾದ ಡೂನ್‍ಗಳು ಎತ್ತರ ಪ್ರದೇಶದಲ್ಲಿವೆ. ಶಿವಾಲಿಕ್ ಬೆಟ್ಟಗಳ ಪೂರ್ವಭಾಗ ನೇಪಾಲದವರೆಗೆ ದಟ್ಟವಾದ ಅರಣ್ಯಗಳಿಂದ ಕೂಡಿದೆ. ಪಶ್ಚಿಮದ ಕಡೆಗೆ ಹೋದಂತೆ ಚದುರಿದಂತೆ ಕಂಡುಬರುತ್ತದೆ. ಈ ಪರ್ವತದ ದಕ್ಷಿಣ ಭಾಗದ, ಅಂದರೆ ಪಂಜಾಬ್ ಹಿಮಚಲ ಪ್ರದೇಶ ಮುಂತಾದ ಕಡೆ ದಟ್ಟಕಾಡುಗಳು ಕಂಡುಬರುತ್ತವೆ.

	ಒಳ ಅಥವಾ ಮಧ್ಯ ಹಿಮಾಲಯ: ಇವು ಶಿವಾಲಿಕ್ ಪರ್ವತ ಶ್ರೇಣಿಗಳ ಉತ್ತರ ಹಾಗೂ ಮಹಾ ಹಿಮಾಲಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿವೆ. ಇವು ಶಿವಾಲಿಕ್ ಮತ್ತು ಮಹಾ ಹಿಮಾಲಯಕ್ಕೆ ಸಮನಾಂತರವಾಗಿ ಪೂರ್ವದಿಂದ ಪಶ್ಚಿಮದ ಕಡೆಗೆ ಹಬ್ಬಿವೆ. ಇವುಗಳನ್ನು ಹಿಮಾಚಲ್ ಅಥವಾ ಕೆಳ ಹಿಮಾಲಯವೆಂದು ಸಹ ಕರೆಯುವರು. ಈ ಭಾಗದಲ್ಲಿ ಹರಿಯುವ ನದಿಗಳ ಆಳ ಕೊರೆತದಿಂದಾಗಿ ಅವುಗಳ ರಚನೆ ಅಸ್ಪಷ್ಟವಾಗಿರುತ್ತದೆ. ಇವು ಸಮುದ್ರಮಟ್ಟಕ್ಕೆ 3500 ರಿಂದ 5000 ಮೀ. ಎತ್ತರವಾಗಿವೆ. ದಕ್ಷಿಣದಿಂದ ಉತ್ತರದ ಕಡೆಗೆ ಎತ್ತರ ಹೆಚ್ಚಾಗುತ್ತದೆ. ಇವುಗಳ ಅಗಲ 60 ರಿಂದ 80 ಕಿಮೀ. ದಕ್ಷಿಣದ ಕಡೆಗೆ ಕಡಿದಾದ ಇಳಿಜಾರನ್ನು ಹೊಂದಿರುವುದರಿಂದ ಭಾರತದ ಕಡೆಯಿಂದ ಹಿಮಾಲಯ ಏರುವುದು ಕಠಿಣ. ಇಲ್ಲಿ ವರ್ಷದ ಎಲ್ಲ ಕಾಲದಲ್ಲಿಯೂ ಹಿಮ ಆವೃತವಾಗಿರುತ್ತದೆ. ಇವು ಅನೇಕ ಸಮನಾಂತರ ಶ್ರೇಣಿಗಳಿಂದ ಕೂಡಿವೆ. ಅವುಗಳಲ್ಲಿ ಧೋಲಾಧರ್, ಪಿರ್ ಪಂಜಾಲ್ ನಾಗ್‍ತಿಭ, ಮಹಾಭಾರತ್ ಮತ್ತು ಮುಸ್ಸೋರಿ ಶ್ರೇಣಿಗಳು ಪ್ರಮುಖವಾದವು. ಈ ಶ್ರೇಣಿಗಳು ಅವಿಚ್ಛಿನ್ನವಾದವು. ಇವುಗಳಲ್ಲಿ ಕೆಲವು ಎತ್ತರವಾದ ಶಿಖರಗಳನ್ನೊಳಗೊಂಡಿದ್ದು, ಪಿರ್ ಪಂಜಾಲ್ ಉದ್ದವಾದ ಶ್ರೇಣಿಯಾಗಿದ್ದು ಇದು ಜೀಲಮ್‍ನದಿಯಿಂದ ಬಿಯೊಸ್‍ನದಿಯವರೆಗೆ ಸು. 300-400 ಕಿಮೀ. ಉದ್ದವಾಗಿದೆ. ಇದು ಜಾಸ್ಕಾರ್ ಶ್ರೇಣಿಯಿಂದ ಬೇರ್ಪಟ್ಟಿದೆ. ಇಲ್ಲಿ ಸು. 5000 ಮೀ. ಎತ್ತರವಿದೆ. ಈ ಶ್ರೇಣಿ ಜ್ವಾಲಾಮುಖಿ ಶಿಲೆಗಳಿಂದಾದುದ್ದು. ಈ ಶ್ರೇಣಿಯಲ್ಲಿ ಕಂಡುಬರುವ ಶಿಖರಗಳಲ್ಲಿ ಪಿರ್ ಪಂಜಾಲ್ (3480ಮೀ), ಬಿಥಿಲ್ (4270ಮೀ), ಗೊಲ್ದಗಾರ್(3812ಮೀ), ಬನಿಹಾಲ್ (2835ಮೀ) ಮುಖ್ಯವಾದವು. ಬನಿಹಾಲ್ ಅನ್ನು ಜಮ್ಮು ಶ್ರೀನಗರ ಹೆದ್ದಾರಿಯಾ ಉಪಯೋಗಿಸಲಾಗುತ್ತದೆ. ಕೃಷ್ಣಗಂಗಾ, ಜೀಲಮ್ ಮತ್ತು ಚೀನಾಬ್ ನದಿಗಳು ಈ ಶ್ರೇಣಿಯನ್ನು ಕೊರೆದು ಹರಿಯುತ್ತವೆ. ರಾವಿನದಿಯ ಆಗ್ನೇಯಾದಲ್ಲಿ ಪಿರ್-ಪಂಜಾಲ್ ನದಿಯು ಮುಂದೆ ದೊಹ್ಲಾ ಶ್ರೇಣಿ ದಾಲ್‍ಹೌಸಿಯೊಳಗೆ ಹಾದು ಹೋಗುತ್ತದೆ. ಇದು ದಕ್ಷಿಣದ ಮುಖ್ಯವಾದ ಪರ್ವತ ಶ್ರೇಣಿ, ಇಲ್ಲಿ 4000 ಮೀ. ಗಿಂತ ಹೆಚ್ಚು ಎತ್ತರವಾಗಿದೆ. ಪಿರ್-ಪಂಜಾಲ್ ಮತ್ತು ಮಹಾ ಹಿಮಾಲಯದ ಜಾಸ್ಕರ್ ಶ್ರೇಣಿಯ ಮಧ್ಯದಲ್ಲಿ ಕಾಶ್ಮೀರ ಕಣಿವೆ ಸು. 135 ಕಿಮೀ. ದೂರ ಆಗ್ನೇಯಾದಿಂದ ವಾಯವ್ಯದ ಕಡೆಗೆ ಹಬ್ಬಿದೆ. ಇದು ಸು. 40 ಕಿಮೀ. ಅಗಲವಾಗಿದೆ. ಇದರ ಒಟ್ಟು ವಿಸ್ತಿರ್ಣ 4291 ಚ.ಕಿಮೀ. ಇದರ ಸರಾಸರಿ ಎತ್ತರ 1585 ಮೀ. ಭೂಗೋಳಶಾಸ್ತ್ರಜ್ಞರು ಮತ್ತು ಭೂಗರ್ಭಶಾಸ್ತ್ರಜ್ಞರು ಈ ಕಣಿವೆಯ ವಿಕಾಸದ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ.

	ಇನ್ನೊಂದು ಪ್ರಮುಖವಾದ ಶ್ರೇಣಿ ಮುಸ್ಸೋರಿ ಶ್ರೇಣಿ. ಇದು 2000-2600 ಮೀ ಎತ್ತರವಾಗಿದೆ. ಸು. 120 ಕಿಮೀ ಉದ್ದವಾಗಿದೆ. ಇಲ್ಲಿ ಅನೇಕ ಹೆಸರುವಾಸಿಯಾದ ಬೇಸಿಗೆ ಗಿರಿಧಾಮಗಳಿವೆ. ಮುಸ್ಸೋರಿ, ನೈನಿಥಾಲ್, ಚರ್ಕಾತ ಮತ್ತು ರಾಣಿಕೆಟ್ ಮುಂತಾದವು. ಅಲ್ಮೋರ ಮತ್ತು ಡಾರ್ಜಲಿಂಗ್‍ಗಳಿರುವುದು ಇಲ್ಲೇ. ಇಲ್ಲಿ ಇನ್ನಿತರ ಪ್ರಮುಖವಾದ ಬೆಟ್ಟಗಳಿವೆ. ಕಠ್ಮಂಡು ಕಣಿವೆಯ ಉತ್ತರಭಾಗ ಮುಖ್ಯವಾದದ್ದು. ಸನ್ ಕೋಸಿನದಿಯ ಪೂರ್ವ, ಸಪ್ತಕೋಸಿ, ಸಿಕ್ಕಿಂ, ಭೂತಾಲ್, ಮಿರಿ, ಅಬೂರ್ ಮತ್ತು ಮಿಷಿ ಪರ್ವತಗಳು ಮುಖ್ಯವಾದವು.

	ಮಹಾ ಹಿಮಾಲಯ: ಇದನ್ನು ಒಳ ಹಿಮಾಲಯ, ಮಧ್ಯ ಹಿಮಾಲಯ ಅಥವಾ ಹಿಮಾದ್ರಿ ಎಂತಲೂ ಕರೆಯುವರು. ಅತ್ಯಂತ ಎತ್ತರವಾದ, ದೀರ್ಘವಾದ ಹಾಗೂ ಅವಿಚ್ಛಿನ್ನ ಅಖಂಡ ಪರ್ವತ ಶ್ರೇಣಿಗಳು ಇಲ್ಲಿವೆ. ಇವುಗಳ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 6100 ಮೀ ಮತ್ತು ಅಗಲ 120 ರಿಂದ 190 ಕಿಮೀ. ಗಳು. ಇವು ಗ್ರಾನೈಟ್ ಶಿಲಾರಚನೆಯಿಂದ ಕೂಡಿವೆ. ಹಿಮಾಲಯದ ಸಮನಾಂತರ ಶ್ರೇಣಿಗಳಲ್ಲಿ ಇವು ಅತ್ಯಂತ ಎತ್ತರವಾದ ಭಾಗವಾಗಿದ್ದು ಪ್ರಪಂಚದ ಅತ್ಯಂತ ಎತ್ತರವಾದ ಶಿಖರಗಳನ್ನು ಒಳಗೊಂಡಿವೆ. ಈ ಪರ್ವತಗಳು ಉತ್ತರಕಡೆಗೆ ಬಳಿದಾಗಿದ್ದು ದಕ್ಷಿಣದ ಕಡೆಗೆ ತುಂಬಾ ಕಡಿದಾದ ಇಳಿಜಾರನ್ನು ಒಳಗೊಂಡಿವೆ. ಇಲ್ಲಿ ಪೂರ್ವದ ಸಟ್ಲೇಜ್ ನದಿ ಭಾಗದಲ್ಲಿ ತದ್ವಿರುದ್ಧವಾದ ಮಡಿಕೆಯಿಂದ ಕೂಡಿವೆ. ಇಲ್ಲಿನ ಎತ್ತರವಾದ ಪ್ರಮುಖ ಪರ್ವತಗಳೆಂದರೆ ಮೌಂಟ್ ಎವರೆಸ್ಟ್ (8848 ಮೀ). ಇದನ್ನು ಚೊಮಲೊಂಗ್ಮೆಲ್ ಸಾಗರ್ ಮಾತಾ ಎಂದೂ ಸಹ ಕರೆಯುವರು. ದಕ್ಷಿಣದ ಎವರೆಸ್ಟ್ ಶ್ರೇಣಿ (8754 ಮೀ). ಕಾಂಚನಜುಂಗಾ ಅಥವಾ ಕಾಂಚನಗಂಗಾ (8598 ಮೀ.), ಲೂಟ್ಸಿ I (8501 ಮೀ.), ಮಾಕಲೂ (8481 ಮೀ), ಕಾಂಚನ ಜುಂಗಾ ದಕ್ಷಿಣ ಶ್ರೇಣಿ (8474 ಮೀ.), ಪಶ್ಚಿಮದ ಕಾಂಚನ ಜುಂಗಾ ಶ್ರೇಣಿ (8420 ಮೀ), ಲೂಟ್ಸಿಷಾರ್ (8384 ಮೀ), ಧವಳಗಿರಿ (8172 ಮೀ),  ಚೂಹೊ (8153 ಮೀ), ನಂಗಾಪರಭತ್ (8126 ಮೀ), ಅನ್ನಪೂರ್ಣ (8078 ಮೀ), ಗೋಸಾಯಿನಾಥನ್ ಅಥವಾ ಶಿಷಾ ಪಂಗ್ಮಾ (8013 ಮೀ), ದಕ್ಷಿಣದ ಮಾಕಲ್ಲೂ (8010 ಮೀ). ಇಲ್ಲಿ ಇನ್ನೂ 7000 ಮೀ. ಗಿಂತಲೂ ಎತ್ತರವಾದ ಅನೇಕ ಪರ್ವತಗಳಿವೆ. 7000-8000 ಮೀ. ಎತ್ತರವಿರುವ ಪ್ರಮುಖ ಶಿಖರಗಳೆಂದರೆ ನಂದಾದೇವಿ (7817 ಮೀ), ಕಾಮೇಟ್ (7756 ಮೀ), ನಾಮ್ಯಬರ್ವ (7756 ಮೀ), ಗುರ್ಲಾ ಮಂಡಾಡಾ (7728 ಮೀ), ಬದರಿನಾಥ್ (7138 ಮೀ) ಮತ್ತು ತ್ರಿಶೂಲ್ (7138 ಮೀ).

	ಈ ಪರ್ವತ ಭಾಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ತುಂಬ ಕಷ್ಟ, ಏಕೆಂದರೆ ಇಲ್ಲಿ ವರ್ಷದ ಎಲ್ಲ ಕಾಲದಲ್ಲಿಯೂ ಹಿಮತುಂಬಿದ್ದು, ಸಮುದ್ರ ಮಟ್ಟದಿಂದ 4570 ಮೀ. ಎತ್ತರವಾಗಿವೆ. ಇಲ್ಲಿ ಕಂಡುಬರುವ ಮುಖ್ಯವಾದ ಕಣಿವೆ ಮಾರ್ಗಗಳೆಂದರೆ ಜಮ್ಮು ಮತ್ತು ಕಾಶ್ಮೀರದ ಬುಲ್‍ರ್ಜಾ ಮತ್ತು ಜೊಜಿಲಾ, ಹಿಮಾಚಲ ಪ್ರದೇಶದ ಬಾರ ಲಾಚಾ ಲಾ ಮತ್ತು ಸಿಪ್ಕಲಾ, ಉತ್ತರ ಪ್ರದೇಶದ ಥಾಗಲಾ, ನಿಟಿ, ಲಿಪೂ ಲೇಕ್, ಮತ್ತು ನಾಥುಲಾ, ಜಲಿಫ್ ಲಾ-ಇವು ಸಿಕ್ಕಿಂನಲ್ಲಿ ಇರುವ ಪ್ರಮುಖವಾದ ಕಣಿವೆ ಮಾರ್ಗಗಳು. ಈ ಕಣಿವೆ ಮಾರ್ಗಗಳ ಎತ್ತರದಲ್ಲಿ ಪ್ರಪಂಚದಲ್ಲಿಯೇ ಎತ್ತರವಾದ ಟೆಬೆಟ್ಟಿನ ಲಾಸ್ ಪ್ರಸ್ಥಭೂಮಿ ಕಂಡು ಬರುತ್ತದೆ ಇದು ಸಮುದ್ರಮಟ್ಟದಿಂದ ಸು. 4386 ಮೀ. ಎತ್ತರವಾಗಿದೆ. 

	2.  ಹಿಮಾಲಯ ಸರಣಿಯಾಚೆಯ ಪರ್ವತಗಳು: ಇವು ಹಿಮಾಲಯ ಪರ್ವತದ ಉತ್ತರ ಭಾಗದಲ್ಲಿ ನೆಲೆಗೊಂಡಿವೆ. ಇವುಗಳನ್ನು ಹಿಮಾಲಯ ಸರಣಿಯಾಚೆಯ ಪರ್ವತಗಳೂ ಎಂದು ಕರೆಯುವರು. ಈ ಭಾಗದ ಹಿಮಾಲಯ ಪರ್ವತಗಳನ್ನು ಟೆಬೆಟ್ಟಿಯನ್ ಹಿಮಾಲಯ ಎಂದೂ ಕರೆಯುವರು. ಈ ಸರಣಿಯಲ್ಲಿ ಕಂಡುಬರುವ ಮುಖ್ಯವಾದ ಪರ್ವತಶ್ರೇಣಿಗಳೆಂದರೆ ಜಾಸ್ಕರ್, ಲಡಕ್, ಕೈಲಾಸ ಮತ್ತು ಕಾರಕೋರಮ್ ಶ್ರೇಣಿ. ಇವು ಸು. 1000 ಕಿಮೀ. ಪೂರ್ವ-ಪಶ್ಚಿಮವಾಗಿ ವಿಸ್ತಾರವಾಗಿವೆ. ಇವು ಸಮುದ್ರ ಮಟ್ಟದಿಂದ 3000 ಮೀ.ಗಿಂತಲೂ ಎತ್ತರವಾಗಿವೆ. ಇವು ಪೂರ್ವದಲ್ಲಿ 40 ಕಿಮೀ ಅಗಲವಾಗಿದ್ದು ಪಶ್ಚಿಮದ ಕಡೆಗೆ ಹೋದಂತೆಲ್ಲ 225 ಕಿಮೀ ಅಗಲ ಮಧ್ಯಭಾಗದಲ್ಲಿ ಕಂಡುಬರುತ್ತದೆ.

	ಜಾಸ್ಕರ್ ಶ್ರೇಣಿ 800 ಪೂರೇದಲ್ಲಿ ಮಹಾಹಿಮಾಲಯವನ್ನು ಸಂಧಿಸುತ್ತದೆ. ವಾಯವ್ಯದಲ್ಲಿ ನಾಗಪರ್ಬತ್ (8126 ಮೀ) ಹಾಗೂ ಡಿಯೋಸಾಯ್ ಪರ್ವತವು ಒಳಗೊಂಡಿದೆ. ಲಡಕ್ ಶ್ರೇಣಿಯ ಉತ್ತರದಲ್ಲಿ ಜಾಸ್ಕರ್ ಶ್ರೇಣಿಯು ಇದಕ್ಕೆ ಸಮಾನಾಂತರವಾಗಿ ಹಬ್ಬಿದೆ. ಇದು 300 ಕಿಮೀ. ಉದ್ದವಾಗಿದ್ದು ಸರಾಸರಿ ಸಮುದ್ರ ಮಟ್ಟದಿಂದ 5800 ಮೀ ಎತ್ತರವನ್ನು ಹೊಂದಿದೆ. ಇಲ್ಲಿ ಕೆಲವು ಪರ್ವತಗಳು ಮಾತ್ರ 6000 ಮೀ. ಎತ್ತರವಾಗಿವೆ ರಾಕ್‍ಪೋಷಿ-ಹಾರಮೋಸ್ ಶ್ರೇಣಿಗಳು ಲಡಕ್ ಶ್ರೇಣಿಯ ವಾಯವ್ಯದ ಕಡೆಗೆ ಸಿಂಧೂ ನದಿಯ ಹತ್ತಿರ ಹಾದುಹೋಗಿವೆ. ಕೈಲಾಸ ಪರ್ವತ ಟೆಬೆಟ್ಟಿನ ಪಶ್ಚಿಮದಲ್ಲಿ ಲಡಕ್ ಶ್ರೇಣಿಯನ್ನು ಅರ್ಧಿಸುತ್ತದೆ. ಇದರ ಸರಾಸರಿ ಎತ್ತರ 5500-6000 ಮೀ. ಹಾಗೂ ಸರಾಸರಿ ಅಗಲ 30 ಕಿಮೀ. ಇಲ್ಲಿಯ ಎತ್ತರದ ಶಿಖರ ಮೌಂಟ್ ಕೈಲಾಸ್ (6714 ಮೀ), ಇಲ್ಲಿ ಸಿಂಧೂನದಿಯು ಕೈಲಾಸ ಪರ್ವತದ ಎತ್ತರದಲ್ಲಿ ಉಗಮಿಸುತ್ತದೆ.

	ಉತ್ತರದ ಅತೀ ಉದ್ದವಾದ ಪರ್ವತ ಶ್ರೇಣಿ ಎಂದರೆ ಕಾರಕೋರಮ್ ಶ್ರೇಣಿ. ಇದು ಭಾರತ, ಆಘ್ಫಾನಿಸ್ತಾನ ಮತ್ತು ಚೀನದ ಗಡಿಯಲ್ಲಿ ಗುರುತಿಸಿಕೊಂಡಿದೆ. ಇದು ಭಾರತ ಮತ್ತು ತುರ್ಕಿಸ್ಥಾನದ ಮಧ್ಯ ಜಲಮೇರೆಯನ್ನೂ ಹಂಚಿಕೆ ಮಾಡಿದೆ. ಇದು ಪೂರ್ವದ ಕಡೆಗೆ ಪಾಮೀರ್‍ನಿಂದ 800 ಕಿಮೀ ಉದ್ದವಾಗಿದೆ. ಈ ಪರ್ವತ ಸರಣಿಯು 120-140 ಕಿಮೀ. ಅಗಲವಾಗಿದೆ. ಇದು ಸಮುದ್ರಮಟ್ಟದಿಂದ 5000 ಮೀ. ಗಿಂತ ಕಡಿಮೆ ಎತ್ತರ ಹೊಂದಿವೆ. ಪ್ರಪಂಚದಲ್ಲಿ ಕಂಡುಬರುವ ಪ್ರಮುಖ ಹಿಮನದಿಗಳು ಇಲ್ಲಿವೆ. ಕೆಲವು ಶಿಖರಗಳು ಸು. 8000 ಮೀ. ಗಿಂತ ಎತ್ತರವಾಗಿವೆ. ಮುಖ್ಯವಾಗಿ ಕೆ2 (8611 ಮೀ) ಪ್ರಪಂಚದಲ್ಲಿಯೇ ಎರಡನೆಯ ಅತ್ಯುನ್ನತವಾದ ಶಿಖರವಾಗಿದೆ. ಇದನ್ನು ಗಾಡ್ವಿನ್ ಆಸ್ಟೆನ್ ಎಂದೂ ಕರೆಯುತ್ತಾರೆ. ಇತರ ಮುಖ್ಯವಾದ ಪರ್ವತಗಳೆಂದರೆ ಗಾಸ್‍ಬ್ರೂಮ್ I,  ಹಿಡನ್ ಶಿಖರ (8068 ಮೀ), ಬ್ರಾಡ್ ಶ್ರೇಣಿ (8047 ಮೀ) ಮತ್ತು ಗ್ರಾಸ್ ಬ್ರೂಮ್ II (8035 ಮೀ). ಇವಲ್ಲದೆ ಇತರ 19 ಪ್ರಮುಖ ಪರ್ವತಗಳು ಸುಮಾರು ಸಮುದ್ರಮಟ್ಟದಿಂದ 7600 ಮೀ.ಗಿಂತ ಎತ್ತರವಾಗಿವೆ. 

	ಕಾರಕೋರಮ್ ಪರ್ವತ ಶ್ರೇಣಿಯಿಂದ ಈಶಾನ್ಯದಲ್ಲಿ ಲಡಾಕ್ ಪ್ರಸ್ಥಭೂಮಿ ಇದೆ. ಇದು 5000 ಮೀ. ಗಿಂತ ಹೆಚ್ಚು ಎತ್ತರ ಹೊಂದಿದೆ. ಇದು ಭಾರತದ ಅತ್ಯಂತ ಎತ್ತರವಾದ ಪ್ರಸ್ಥಭೂಮಿಯಾಗಿದೆ. ಇಲ್ಲಿ ಹಲವಾರು ಮೈದಾನ ಭಾಗಗಳು ಸಹ ಕಂಡುಬರುತ್ತವೆ. ಸೋಡಾ, ಆಕ್ಸೈಚಿನ್, ಲಿಂಜಿಥಾಂಗ್, ದೆಪ್‍ಸಾಂಗ್ ಮತ್ತು ಚಾಂಗ್ ಚಿನೋ ಮುಂತಾದ ಪರ್ವತಗಳಿವೆ. 

	ಪೂರ್ವದ ಬೆಟ್ಟಗಳುÀ ಅಥವಾ ಪೂರ್ವಾಚಲ: ದಿಹಾಂಗ್ ಕಂದರವನ್ನು ದಾಟಿದ ಅನಂತರ ಹಿಮಾಲಯ ಸರಣಿಯು ತಕ್ಷಣ ದಕ್ಷಿಣಾಭಿಮುಖವಾಗಿ ತಿರುಗಿ ಎತ್ತರದಲ್ಲಿ ಚಿಕ್ಕ ಬೆಟ್ಟಗಳ ಸರಣಿಯಂತೆ. ಪಶ್ಚಿಮದ ಕಡೆ ಮೊನಚಾಗಿ ಉಬ್ಬಿದಂತೆ ಕಂಡುಬರುತ್ತವೆ. ಇವುಗಳು ಭಾರತದ ಪೂರ್ವಭಾಗದಲ್ಲಿ ಕಂಡುಬರುವುದರಿಂದ ಪೂರ್ವಾಚಲ ಎಂದು ಕರೆಯುವರು. ಉತ್ತರದಲ್ಲಿ ಅರುಣಾಚಲ ಪ್ರದೇಶದಿಂದ ದಕ್ಷಿಣದಲ್ಲಿ ಮಿಜೊರಾಮ್‍ವರೆಗೆ ಹಾಗೂ ಮಯನ್ಮಾರ್ ಜೊತೆ ಗಡಿಯನ್ನು ಗುರುತಿಸುತ್ತವೆ. ಇವು ರಚನೆಯಲ್ಲಿ ಹಿಮಾಲಯ ಪರ್ವತದಂತೆ ಇರದೆ ವ್ಯತ್ಯಾಸದಿಂದ ಕೂಡಿರುತ್ತವೆ. ಇಲ್ಲಿ ಉತ್ತರದ ಅರುಣಾಚಲಪ್ರದೇಶದಿಂದ ಮಯನ್ಮಾರ್ ಗಡಿಯನ್ನು ಪಾಟ್ಕಮ್ ಬಂಧಿಸಿದೆ. ಇದು ಗಟ್ಟಿ ಮರಳು ಶಿಲೆಯಿಂದ ಕೂಡಿದ್ದು ಸರಾಸರಿ ಸಮುದ್ರಮಟ್ಟದಿಂದ 2000ಮೀ.-3000 ಮೀ. ಎತ್ತರವಿದೆ. ದಕ್ಷಿಣಾಭಿಮುಖವಾಗಿ ಸ್ವಲ್ಪ ದೂರದಲ್ಲಿ ನಾಗಬೆಟ್ಟಗಳೊಂದಿಗೆ ಇದು ಸೇರಿಕೊರಿತ್ತವೆ. ಇಲ್ಲಿ ಎತ್ತರವಾದ ಪರ್ವತ ಸರಾಮತಿ (3826 ಮೀ). ಪಟ್ಟಕೈಬೂಮ್ ಮತ್ತು ನಾಗಬೆಟ್ಟಗಳು ಮಯನ್ಮಾರ್ ಮತ್ತು ಭಾರತದ ನಡುವೆ ಜಲಹಂಚಿಕೆಯನ್ನು ನಿರ್ಧರಿಸುತ್ತವೆ. ಇಲ್ಲಿಯ ಕೊಹಿಮಾ ಬೆಟ್ಟ ಮರಳು ಕಲ್ಲಿನಿಂದ ಕೂಡಿದ್ದು ಸ್ಲೇಟ್ ಶಿಲೆಯನ್ನು ಒಳಗೊಂಡಿವೆ. ಮಣಿಪುರ ಮತ್ತು ನಾಗಬೆಟ್ಟಗಳು ಸರಾಸರಿ ಸಮುದ್ರಮಟ್ಟದಿಂದ 2500 ಮೀ. ಗಿಂತ ಕಡಿಮೆ ಎತ್ತರವನ್ನು ಹೊಂದಿವೆ. ಇವು ಮಣಿಪುರ ಮತ್ತು ಮಯನ್ಮಾರ್ ಗಡಿಯಾಗಿವೆ. ಇವಲ್ಲದೆ ಖಾಸ್ರಿ ಮತ್ತು ಗಾರೋ ಬೆಟ್ಟಗಳು ಸಹ ಇಲ್ಲಿ ಕಂಡುಬರುತ್ತವೆ. ಮಿಜೋರಾಮ್‍ನ ದಕ್ಷಿಣದಲ್ಲಿ ನೀಲಿ ಪರ್ವತ ಅಥವಾ ಬ್ಲೂ ಪರ್ವತ (2157 ಮೀ) ಇದೆ. ಇವುಗಳಿಗಿಂತ ದಕ್ಷಿಣದಲ್ಲಿ ಕಡಿಮೆ ಎತ್ತರದ ಗಟ್ಟಿಮೇಲ್ಮೈನ, ದಟ್ಟವಾದ ಅರಣ್ಯ ಮತ್ತು ಸಣ್ಣ ಝರಿಗಳು ಕಂಡುಬರುತ್ತವೆ.

	ಹಿಮಾಲಯದ ಪ್ರಾದೇಶಿಕ ವಿಭಾಗಗಳು: ಸರ್ ಸಿಡ್ನಿ ಬುರ್ರೇಡ್‍ರವರು ಹಿಮಾಲಯದ ಒಟ್ಟು ಉದ್ದ ಹಾಗೂ ಅಲ್ಲಿ ಕಂಡುಬರುವ ನದಿಕಣಿವೆಯನ್ನು ಆಧರಿಸಿ ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದಾರೆ.

	ಅ) ಪಂಜಾಬ್ ಹಿಮಾಲಯ: ಸಿಂಧೂ ಮತ್ತು ಸಟ್ಲೇಜ್ ನದಿಯ ಒಟ್ಟು 560 ಕಿಮೀ ಉದ್ದವಾದ ಪ್ರದೇಶವನ್ನು ಪಂಜಾಬ್ ಹಿಮಾಲಯವೆಂದು ಕರೆಯುವರು. ಇದು ವಿಸ್ತಾರವಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಮುಂತಾದವುಗಳನ್ನೂ ಒಳಗೊಂಡಿರುವುದರಿಂದ ಕಾಶ್ಮೀರ ಮತ್ತು ಹಿಮಾಚಲ್ ಹಿಮಾಲಯಗಳೆಂದು ಕರೆಯಲಾಗಿದೆ. ಇಲ್ಲಿ ಕಾರಕೋರಮ್, ಲಡಕ್, ಪಿರ್ ಪಂಜಾಲ್, ಜಾಷರ್ ಮತ್ತು ಧಾವ್ಲೂ ದಾರ್ ಪರ್ವತ ಸರಣಿಗಳು ಕಂಡುಬರುತ್ತವೆ. ಇಲ್ಲಿ 3444 ಮೀ. ಎತ್ತರದ ಜೋಜಿಲಾ ಮಾರ್ಗ ಉತ್ತಮವಾಗಿದೆ. ಇಲ್ಲಿ ದಿಬ್ಬಗಳು, ಸರೋವರಗಳು, ಕಣಿವೆಗಳು ಕಂಡುಬರುತ್ತವೆ. 

	ಆ) ಕುಮಾವೋನ್ ಹಿಮಾಲಯ: ಇದು ಉತ್ತರ ಪ್ರದೇಶದ ಉತ್ತರದಲ್ಲಿದ್ದು ಸಟ್ಲೀಜ್‍ನಿಂದ ಕಾಳಿನದಿಯವರೆಗೆ ಹರಡಿದ್ದು ಸು. 38000 ಚ.ಕಿಮೀ. ಕ್ಷೇತ್ರವನ್ನು ಆವರಿಸಿದೆ. ಇಲ್ಲಿ ಅನೇಕ ಎತ್ತರವಾದ ಶಿಖರಗಳಿವೆ. ಉದಾ: ನಂದಾದೇವಿ, ಕಾಮೆಟ್, ಬದ್ರಿನಾಥ್, ಕೇದಾರ್‍ನಾಥ್, ನಂದಾಕೋಲ್, ಗಂಗೋತ್ರಿ ಅಲ್ಲದೆ ಅನೇಕ ಸರೋವರಗಳು ಮತ್ತು ಗಿರಿಧಾಮಗಳು ಕಂಡುಬರುತ್ತವೆ. ಗಿರಿಧಾಮಗಳಲ್ಲಿ ಡೆಹರಾಡೂನ್, ನೈನಿಥಾಲ್, ಮುಸ್ಸೂರಿ ಮತ್ತು ಭೀಮತಾಲ್‍ಗಳು ಪ್ರಮುಖವಾದವು.

	ಇ) ನೇಪಾಲ ಹಿಮಾಲಯ: ಇದು ಕಾಳಿನದಿಯಿಂದ ಟಿಸ್ತಾ ನದಿಯವರೆಗೆ ಸುಮಾರು 800 ಕಿಮೀ. ಉದ್ದವಾಗಿದ್ದು 1.19ಲಕ್ಷ ಚ.ಕಿಮೀ. ಪ್ರದೇಶವನ್ನಾವರಿಸಿದೆ. ಈ ಭಾಗದಲ್ಲಿ ಅನೇಕ ಎತ್ತರವಾದ ಶಿಖರಗಳು ಇವೆ. ಉದಾ: ಧವಳಗಿರಿ, ಅನ್ನಪೂರ್ಣ, ಮೊನಸ್ಲು, ಮೌಂಟ್ ಎವರೆಸ್ಟ್, ಮಾಕೂಲು, ಕಾಂಚನಜುಂಗ ಮುಂತಾದವು. ಸಿಕ್ಕಿಂ ಶ್ರೇಣಿಯು ಇಲ್ಲಿಯೇ ಕಂಡುಬರುತ್ತದೆ. ಇವುಗಳಲ್ಲದೆ ಡಾರ್ಜಿಲಿಂಗ್ ಹಿಮಾಲಯಗಳು ಪಶ್ಚಿಮ ಬಂಗಾಲ ಮತ್ತು ಭೂತಾನ ಹಿಮಾಲಯಗಳು ಹಂಚಿಕೆಯಾಗಿವೆ.

	ಈ ಅಸ್ಸಾಂ ಹಿಮಾಲಯ: ಇದು ಟಿಸ್ತಾ ನದಿಯಿಂದ ಬ್ರಹ್ಮಪುತ್ರನದಿ ಕಣಿವೆಯ ಮ್‍ಚಬಾರ್ವ ಶಿಖರದವರೆಗೆ ಸು. 720 ಕಿಮೀ. ದೂರ ಹಬ್ಬಿದೆ. ಸು. 67,500 ಚ.ಕಿಮೀ. ಕ್ಷೇತ್ರವನ್ನಾವರಿಸಿದೆ. ಇಲ್ಲಿನ ಅನೇಕ ಶಿಖರಗಳು 300 ಮೀ. ಗಿಂತಲೂ ಎತ್ತರವಾಗಿವೆ. ಅವುಗಳಲ್ಲಿ ಪಾಹುನ್ರಿ ಮತ್ತು ಕುಲ್ಹಾ ಕಾಂಗಿ ಶಿಖರಗಳು ಪ್ರಮುಖವಾದವು.

	ಹಿಮಾಲಯದ ಪ್ರಾಮುಖ್ಯತೆ: ಹಿಮಾಲಯ ಪರ್ವತ ಭಾರತ ವಾಯುಗುಣದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತಿದೆ. ಪ್ರಪಂಚದ ಬೇರೆಯಾವ ದೇಶದಲ್ಲಿಯೂ  ಇಷ್ಟು ಗಾಢವಾಗಿ ಒಂದು ಪರ್ವತ ಶ್ರೇಣಿಯು  ಪ್ರಭಾವವನ್ನು ಬೀರಿಲ್ಲ. ಉತ್ತರ ಭಾರತದ ಬಹುತೇಕ ನದಿಗಳು ಹುಟ್ಟುವುದೇ ಈ ಪರ್ವತಾವಳಿಗಳ ಮೂಲದಿಂದ. ನೇಪಾಲ, ಭೂತಾನ, ಟಿಬೆಟ್, ಕಾಶ್ಮೀರಗಳು ಇದರಲ್ಲಿ ಅಂತರ್ಗತವಾಗಿವೆ. ಹಿಮಾಲಯ ಭಾರತ ಉಪಖಂಡದ ಸಮಾಜ ಹಾಗೂ ಸಂಸ್ಕøತಿಗಳ ಮೇಲೆಯೂ ಮೂಲಭೂತ ಪ್ರಭಾವ ಬೀರಿದೆ. ಇಲ್ಲಿ ಹುಟ್ಟಿ ವಿಕಾಸವಾದ ಮತಧರ್ಮಗಳು ತತ್ತ್ವ ದರ್ಶನಗಳು ಇದರಿಂದ ಪ್ರಭಾವಿತವಾಗಿವೆ. ಪ್ರಕೃತಿಯ ವೈಭವ ಮತ್ತು ಬಲಿಷ್ಠತೆಯ ಮುಂದೆ ಮನುಷ್ಯನ ಅಸ್ತಿತ್ವ ಗೌಣವೆಂಬ ಭಾವನೆ ಹಿಂದಿನ ಋಷಿಮುನಿಗಳ ಕಾಲದಿಂದಲೂ ಜನಮಾನಸದಲ್ಲಿ ಮನೆ ಮಾಡಿತ್ತು. ಸಾಕ್ಷಾತ್ ಪರಮೇಶ್ವರ ಇಲ್ಲಿರುವ ಕೈಲಾಸದಲ್ಲಿ ನೆಲೆಸಿರುವನೆಂದು ಸನಾತನ ಧರ್ಮದ ಅನುಯಾಯಿಗಳು ನಂಬಿದ್ದರು. ಇಲ್ಲಿ ನೆಲೆಸಿ ತಪಸ್ಸು ಮಾಡುವವರ ಸಂಖ್ಯೆ ಇಂದೂ ಗಣನೀಯವಾಗಿದೆ. ಇಲ್ಲಿನ ಅಮರನಾಥ, ಬದರಿನಾಥ, ಮಾನಸಸರೋವರ, ಹರದ್ವಾರ, ಋಷಿಕೇಶ, ಕೇದಾರ, ಕಠ್ಮಂಡು ಮೊದಲಾದ ಪವಿತ್ರ ಸ್ಥಳಗಳು ಇಂದಿಗೂ ಹಿಂದೂ ಭಕ್ತರನ್ನು ಆಕರ್ಷಿಸುತ್ತಿವೆ. ಬುದ್ಧನ ಕಪಿಲವಸ್ತು ಇರುವುದೂ ಈ ವಲಯದಲ್ಲೇ. ಈ ವಲಯ ಸಾಹಸಿಗರಿಗೆ ಸವಾಲಾಗಿದೆ. ವಿಜ್ಞಾನಿಗಳಿಗೆ ಅದ್ಭುತವಾಗಿದೆ. ಪ್ರವಾಸಿಗರಿಗೆ ಆನಂದದ ಸೆಲೆಯಾಗಿದೆ.		
			(ಸಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ